ಮುಂಬೈ: ಇನ್ಮುಂದೆ ನೀವು ರೈಲಿನಲ್ಲಿ ಪ್ರಯಾಣಿಸುವಾಗಲೇ ಎಟಿಎಂನಿಂದ ಹಣ ಡ್ರಾ ಮಾಡಬಹುದು. ಭಾರತೀಯ ರೈಲ್ವೆ ಇಂಥದೊಂದು ಸೌಲಭ್ಯವನ್ನು ಪರಿಚಯಿಸಲು ಮುಂದಾಗಿದೆ. ಮುಂಬೈ – ಮನ್ಮಾಡ್ ಪಂಚವಟಿ ಎಕ್ಸ್ಪ್ರೆಸ್ ರೈಲಿನಲ್ಲಿ ಎಟಿಎಂ ಅಳವಡಿಸಲಾಗಿದ್ದು, ದೇಶದ ಮೊದಲ ಎಟಿಎಂ ಸಹಿತ ರೈಲು ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
ಬೋಗಿಯಲ್ಲಿ ಎಟಿಎಂ: ರೈಲಿನ ಹವಾನಿಯಂತ್ರಿತ ಬೋಗಿಯಲ್ಲಿ ಎಟಿಎಂ ಅನ್ನು ಸ್ಥಾಪಿಸಲಾಗಿದ್ದು, ಇದರ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ರೈಲು ಚಲಿಸುತ್ತಿರುವಾಗಲೂ ಪ್ರಯಾಣಿಕರು ಹಣ ಡ್ರಾ ಮಾಡಬಹುದು. ಭಾರತೀಯ ರೈಲ್ವೆಯ ನವೀನ ಮತ್ತು ಶುಲ್ಕೇತರ ಆದಾಯ ಕಲ್ಪನೆಗಳ ಯೋಜನೆಯ (ಐಎನ್ಎಫ್ಆರ್ಐಎಸ್) ಭಾಗವಾಗಿ ಬೋಗಿಯಲ್ಲಿ ಎಟಿಎಂ ಅನ್ನು ಪರಿಚಯಿಸಲಾಗಿದೆ.
ಪ್ರಯೋಗ ಯಶಸ್ವಿ ಎಂದ ಅಧಿಕಾರಿಗಳು: ಭಾರತೀಯ ರೈಲ್ವೆಯ ಭುಸಾವಲ್ ವಿಭಾಗ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ ನಡುವಿನ ಸಹಯೋಗದೊಂದಿಗೆ ಈ ಎಟಿಎಂ ಸ್ಥಾಪಿಸಲಾಗಿದೆ. ಪ್ರಯಾಣದ ಉದ್ದಕ್ಕೂ ಯಂತ್ರವು ಸುಗಮವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಪ್ರಯೋಗವು ಯಶಸ್ವಿಯಾಗಿ ನಡೆಯಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲಲ್ಲಿ ಸಿಗ್ನಲ್ ಸಮಸ್ಯೆ: ಆದಾಗ್ಯೂ, ಸುರಂಗಗಳು ಮತ್ತು ಸೀಮಿತ ಮೊಬೈಲ್ ಸಂಪರ್ಕದಿಂದಾಗಿ ಕಳಪೆ ಸಿಗ್ನಲ್ಗೆ ಹೆಸರುವಾಸಿಯಾದ ಇಗತ್ಪುರಿ ಮತ್ತು ಕಸರಾ ನಡುವಿನ ಮಾರ್ಗದಲ್ಲಿ ಅಲ್ಪಕಾಲ ನೆಟ್ ವರ್ಕ್ ಸಮಸ್ಯೆಗಳು ಕಂಡು ಬಂದವು.
ಈ ಬಗ್ಗೆ ಮಾತನಾಡಿದ ಭುಸಾವಲ್ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಇತಿ ಪಾಂಡೆ, “ಫಲಿತಾಂಶಗಳು ಉತ್ತಮವಾಗಿವೆ. ಜನರು ಈಗ ಪ್ರಯಾಣಿಸುವಾಗಲೇ ತಮ್ಮ ಖಾತೆಯಿಂದ ಹಣ ಡ್ರಾ ಮಾಡಲು ಸಾಧ್ಯವಾಗಲಿದೆ. ನಾವು ಎಟಿಎಂ ಯಂತ್ರದ ಕಾರ್ಯಕ್ಷಮತೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತೇವೆ.” ಎಂದು ಹೇಳಿದರು. ಭುಸಾವಲ್ ವಿಭಾಗ ಆಯೋಜಿಸಿದ್ದ ಐಎನ್ಎಫ್ಆರ್ಐಎಸ್ (INFRIS) ಸಭೆಯಲ್ಲಿ ಮೊದಲ ಬಾರಿಗೆ ರೈಲಿನಲ್ಲಿ ಎಟಿಎಂ ಅಳವಡಿಸುವ ಕಲ್ಪನೆಯನ್ನು ಪ್ರಸ್ತಾಪಿಸಲಾಗಿತ್ತು ಎಂದು ಅವರು ತಿಳಿಸಿದರು.
ಎಟಿಎಂ ಅನ್ನು ಎಸಿ ಬೋಗಿಯಲ್ಲಿ ಅಳವಡಿಸಲಾಗಿದ್ದರೂ, ಪಂಚವಟಿ ಎಕ್ಸ್ಪ್ರೆಸ್ ನ ಎಲ್ಲಾ 22 ಬೋಗಿಗಳಲ್ಲಿನ ಪ್ರಯಾಣಿಕರು ಇದನ್ನು ಬಳಸಬಹುದು. ನಗದು ಡ್ರಾ ಮಾಡುವುದು ಮಾತ್ರವಲ್ಲದೇ ಪ್ರಯಾಣಿಕರು ಚೆಕ್ ಪುಸ್ತಕಗಳನ್ನು ಆರ್ಡರ್ ಮಾಡಲು ಮತ್ತು ಖಾತೆ ಸ್ಟೇಟ್ ಮೆಂಟ್ಗಳನ್ನು ಪಡೆಯಲು ಎಟಿಎಂ ಬಳಸಬಹುದು.
ದಿನದ 24 ಗಂಟೆ ಸಿಸಿಟಿವಿ ಕಣ್ಗಾವಲು: ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಟಿಎಂಗೆ ಶಟರ್ ಅಳವಡಿಸಲಾಗಿದೆ ಮತ್ತು ದಿನದ 24 ಗಂಟೆಯೂ ಸಿಸಿಟಿವಿ ಕ್ಯಾಮೆರಾಗಳಿಂದ ಮೇಲ್ವಿಚಾರಣೆ ಮಾಡಲಾಗುತ್ತದೆ. ಈ ಸೌಲಭ್ಯ ಪ್ರಯಾಣಿಕರಲ್ಲಿ ಜನಪ್ರಿಯವಾದರೆ ಸೇವೆಯನ್ನು ಮತ್ತಷ್ಟು ರೈಲುಗಳಿಗೆ ವಿಸ್ತರಿಸಬಹುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
Follow Me