ಉತ್ತರ ಪ್ರದೇಶ: ಪಾಳುಬಿದ್ದ ಕಟ್ಟಡದಿಂದ ಶಿಶುವನ್ನು ರಕ್ಷಿಸಿ ಮಾನವೀಯತೆ ಮೆರೆದ ನಟಿ ದಿಶಾ ಪಟಾನಿ ಸಹೋದರಿ

ಬರೇಲಿ: ಬಾಲಿವುಡ್ ನಟಿ ದಿಶಾ ಪಟಾನಿ ಅವರ ಸಹೋದರಿ ಖುಷ್ಬೂ ಪಟಾನಿ ರವಿವಾರ ಬೆಳಿಗ್ಗೆ ಉತ್ತರ ಪ್ರದೇಶದ ಬರೇಲಿಯಲ್ಲಿ ಪಾಳುಬಿದ್ದ ಕಟ್ಟಡದಿಂದ ಸುಮಾರು 9 ರಿಂದ 10 ತಿಂಗಳ ವಯಸ್ಸಿನ ಅನಾಥ ಶಿಶುವನ್ನು ಗೋಡೆ ಹತ್ತಿ ರಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Khushboo patani ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಖುಷ್ಬೂ ಪಟಾನಿಯವರು ಪಾಳು ಬಿದ್ದ ಕಟ್ಟಡವನ್ನು ಪ್ರವೇಶಿಸಿದ ವೇಳೆ ಒಂಬತ್ತರಿಂದ ಹತ್ತು ತಿಂಗಳ ಹೆಣ್ಣು ಮಗುವೊಂದು ಕೊಳಕಿನಲ್ಲಿ ಬಿದ್ದು ಅಳುತ್ತಿರುವುನ್ನು ಕಾಣಬಹುದು. ಆ ತಕ್ಷಣವೇ ಅದನ್ನು ಎತ್ತಿಕೊಂಡು ಅಲ್ಲಿಂದ ಬಂದಿರುವುದನ್ನು ಕಾಣಬಹುದು.

ಪ್ರಧಾನಮಂತ್ರಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮತ್ತು ಇತರ ಅಧಿಕಾರಿಗಳನ್ನು ಟ್ಯಾಗ್ ಮಾಡಿ, ‘ಜಾಕೋ ರಾಖೆ ಸೈಯಾನ್, ಮಾರ್ ಸಕೆ ನಾ ಕೋಯ್’ ಎಂಬ ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮಗುವಿಗೆ ‘ರಾಧಾ’ ಎಂದು ನಾಮಕರಣ ಮಾಡಿದ್ದು, ಹೆಣ್ಣು ಮಕ್ಕಳ ರಕ್ಷಣೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಮಗುವಿನ ಭವಿಷ್ಯವನ್ನು ಸುರಕ್ಷಿತವಾಗಿಡಲು ತಾವು ಖಾತರಿಪಡಿಸುವುದಾಗಿ ಖುಷ್ಬೂ ಭರವಸೆ ನೀಡಿದ್ದಾರೆ.

ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ದಿಶಾ ಪಟಾನಿ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಖುಷ್ಬೂ ಅವರ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಬಳಕೆದಾರರೊಬ್ಬರು, ದೇವರ ಆಶೀರ್ವಾದವು ಆ ಮಗುವಿನ ಮೇಲೆ ಹಾಗೂ ನಿಮ್ಮ ಮೇಲೆ ಇರಲಿ ಎಂದಿದ್ದಾರೆ. ಇನ್ನೊಬ್ಬರು, ನಿಜಕ್ಕೂ ಈ ದೃಶ್ಯವು ನೋಡಿದಾಗ ಕಣ್ಣಲ್ಲಿ ನೀರು ಬಂದಿದೆ. ಆ ಮಗುವನ್ನು ರಕ್ಷಿಸಲು ಆ ದೇವರೇ ನಿಮ್ಮನ್ನು ಅಲ್ಲಿಗೆ ಕಳುಹಿಸಬೇಕು ಎಂದಿದ್ದಾರೆ. ಮತ್ತೊಬ್ಬರು, ನಿಮ್ಮ ಧೈರ್ಯದಿಂದ ಆ ಮಗುವಿನ ಜೀವ ಉಳಿಯಿತು ಎಂದು ಕಾಮೆಂಟ್ ಮಾಡಿದ್ದಾರೆ.

ಖುಷ್ಬೂ ಪಟಾನಿ ಈ ಹೆಣ್ಣು ಮಗುವನ್ನು ರಕ್ಷಿಸಿದ ಬಳಿಕ ತಕ್ಷಣವೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ನೀಡಿದ ಪೊಲೀಸರು ಪೋಷಕರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಮಗುವಿನ ತಾಯಿಯು ಬಿಹಾರ ಮೂಲದವರು ಎಂದು ತಿಳಿದು ಬಂದಿದೆ.