ಪಹಲ್ಗಾಮ್ ದಾಳಿ: ಶಾರುಖ್, ಸಲ್ಮಾನ್ ಖಾನ್ ಏನಂದ್ರು?

ಭಯೋತ್ಪಾದಕರು 27 ನಾಗರಿಕರನ್ನು ಗುಂಡಿಕ್ಕಿ ಕೊಂದ ನಂತರ ಕಾಶ್ಮೀರ ಕಣಿವೆಯಲ್ಲಿ ರಕ್ತದೋಕುಳಿಯಾಗಿದೆ. ಹಸಿರಾಗಿದ್ದ ಕಣಿವೆ ಕೆಂಪು ಬಣ್ಣಕ್ಕೆ ತಿರುಗಿದೆ. ಇದೀಗ ಬಾಲಿವುಡ್ ನಟ ಶಾರುಖ್ ಖಾನ್ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳ ಬೆಂಬಲಕ್ಕೆ ನಿಂತಿರುವ ಶಾರುಖ್ ಖಾನ್, ಅಗತ್ಯವಿರುವ ಸಮಯದಲ್ಲಿ ಒಗ್ಗಟ್ಟಿನಿಂದ ನಿಲ್ಲುವಂತೆ ಒತ್ತಾಯಿಸಿದರು.

“ಪಹಲ್ಗಾಮ್‌ ನಲ್ಲಿ ನಡೆದಿರುವ ವಿಶ್ವಾಸಘಾತುಕ ಕೃತ್ಯ ಮತ್ತು ಅಮಾನವೀಯ ಹಿಂಸಾಚಾರದ ಬಗ್ಗೆ ದುಃಖ ಮತ್ತು ಕೋಪವನ್ನು ವ್ಯಕ್ತಪಡಿಸಲು ಪದಗಳು ಸಾಲದು. ಇಂತಹ ಸಮಯದಲ್ಲಿ, ದೇವರ ಕಡೆಗೆ ತಿರುಗಿ ಸಂತ್ರಸ್ತ ಕುಟುಂಬಗಳಿಗಾಗಿ ಪ್ರಾರ್ಥನೆ ಸಲ್ಲಿಸಬಹುದು. ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸಬಹುದು. ಒಂದು ರಾಷ್ಟ್ರವಾಗಿ ನಾವು ಒಗ್ಗಟ್ಟಿನಿಂದ, ಬಲವಾಗಿ ನಿಂತು ಈ ಘೋರ ಕೃತ್ಯದ ವಿರುದ್ಧ ನ್ಯಾಯವನ್ನು ಪಡೆಯೋಣ” ಎಂದು ಅವರು ಬರೆದಿದ್ದಾರೆ.

ಸಲ್ಮಾನ್ ಖಾನ್ ಕೂಡ ಎಕ್ಸ್ ಚಿತ್ರದ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಭೂಮಿಯ ಮೇಲಿನ ಸ್ವರ್ಗವಾದ ಕಾಶ್ಮೀರ ನರಕವಾಗಿ ಬದಲಾಗುತ್ತಿದೆ. ಅಮಾಯಕ ಜನರನ್ನು ಗುರಿಯಾಗಿಸಿಕೊಂಡಿದ್ದಾರೆ, ನನ್ನ ಹೃದಯ ಅವರ ಕುಟುಂಬಗಳಿಗಾಗಿ ಮಿಡಿಯುತ್ತದೆ. ಒಬ್ಬ ಅಮಾಯಕ ವ್ಯಕ್ತಿಯನ್ನು ಕೊಲ್ಲುವುದು ಇಡೀ ರಾಷ್ಟ್ರವನ್ನೇ ಕೊಂದಂತೆ ಎಂದು ಅವರು ಬರೆದಿದ್ದಾರೆ.

ಪ್ರಿಯಾಂಕಾ ಚೋಪ್ರಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಭಯೋತ್ಪಾದಕ ಕೃತ್ಯವನ್ನು ಖಂಡಿಸಿ ಪ್ರಬಲ ಸಂದೇಶವನ್ನು ಬರೆದಿದ್ದಾರೆ.

“ಪಹಲ್ಗಾಮ್‌ನಲ್ಲಿ ನಡೆದದ್ದು ಖಂಡನೀಯ. ಜನರು ರಜೆಯಲ್ಲಿ, ಕಾಶ್ಮೀರದ ಸೌಂದರ್ಯವನ್ನು ಸವಿಯುತ್ತಾ ಹನಿಮೂನ್‌ಗಳಲ್ಲಿ, ತಮ್ಮ ಕುಟುಂಬಗಳೊಂದಿಗೆ ರಜೆ ಕಳೆಯಲು ಅಲ್ಲಿಗೆ ಹೋಗಿದ್ದರು. ಇದು ನಾವು ಬೇಗ ಮೂವ್ ಆಗಬಹುದಾದ ಒಂದು ದುರಂತವಲ್ಲ” ಎಂದು ಅವರು ಬರೆದಿದ್ದಾರೆ.

“ಅನೇಕ ಮುಗ್ಧ ಜೀವಗಳು ಅವರು ಎಂದಿಗೂ ಕೇಳದ ಬಿರುಗಾಳಿಗೆ ಸಿಲುಕಿದವು. ಅವರ ಪ್ರೀತಿಪಾತ್ರರ ಮುಂದೆಯೇ  ಅವರನ್ನು ಗುರಿಯಾಗಿಸಿಕೊಂಡರು. ಇದರಿಂದ ನನಗೆ ತುಂಬಾ ನೋವಾಗಿದೆ ಎಂದು ಪ್ರಿಯಾಂಕಾ ಹೇಳಿದರು.

ಅಜಯ್ ದೇವಗನ್, ಅಕ್ಷಯ್ ಕುಮಾರ್, ಅಲ್ಲು ಅರ್ಜುನ್, ರಾಮ್ ಚರಣ್, ಕರೀನಾ ಕಪೂರ್, ಆಲಿಯಾ ಭಟ್, ಕತ್ರಿನಾ ಕೈಫ್ ಅವರಂತಹ ತಾರೆಯರು ಸಹ ತಮ್ಮ ದುಃಖವನ್ನು ವ್ಯಕ್ತಪಡಿಸಿ, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.

ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಎಂಬ ರೆಸಾರ್ಟ್ ಪಟ್ಟಣದ ಬಳಿಯ ಜನಪ್ರಿಯ ಹುಲ್ಲುಗಾವಲು ಬೈಸರನ್‌ನಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ 27 ಜನರು ಸಾವನ್ನಪ್ಪಿದರು. ಈ ದಾಳಿಯಲ್ಲಿ ಭಾರತೀಯ ನೌಕಾಪಡೆಯ ಅಧಿಕಾರಿ ಮತ್ತು ಗುಪ್ತಚರ ಬ್ಯೂರೋ ಸಿಬ್ಬಂದಿಯೂ ಸಾವನ್ನಪ್ಪಿದ್ದಾರೆ.