ರೈಲಿನಲ್ಲೂ ATM; ಇನ್ನು ನೀವು ಪ್ರಯಾಣಿಸುವಾಗಲೇ ಹಣ ಡ್ರಾ ಮಾಡಬಹುದು

ಮುಂಬೈ: ಇನ್ಮುಂದೆ ನೀವು ರೈಲಿನಲ್ಲಿ ಪ್ರಯಾಣಿಸುವಾಗಲೇ ಎಟಿಎಂನಿಂದ ಹಣ ಡ್ರಾ ಮಾಡಬಹುದು. ಭಾರತೀಯ ರೈಲ್ವೆ ಇಂಥದೊಂದು ಸೌಲಭ್ಯವನ್ನು ಪರಿಚಯಿಸಲು ಮುಂದಾಗಿದೆ. ಮುಂಬೈ – ಮನ್ಮಾಡ್ ಪಂಚವಟಿ ಎಕ್ಸ್​ಪ್ರೆಸ್ ರೈಲಿನಲ್ಲಿ ಎಟಿಎಂ ಅಳವಡಿಸಲಾಗಿದ್ದು, ದೇಶದ ಮೊದಲ ಎಟಿಎಂ ಸಹಿತ ರೈಲು ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಬೋಗಿಯಲ್ಲಿ ಎಟಿಎಂ: ರೈಲಿನ ಹವಾನಿಯಂತ್ರಿತ ಬೋಗಿಯಲ್ಲಿ ಎಟಿಎಂ ಅನ್ನು ಸ್ಥಾಪಿಸಲಾಗಿದ್ದು, ಇದರ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ರೈಲು ಚಲಿಸುತ್ತಿರುವಾಗಲೂ ಪ್ರಯಾಣಿಕರು ಹಣ ಡ್ರಾ ಮಾಡಬಹುದು. ಭಾರತೀಯ ರೈಲ್ವೆಯ ನವೀನ ಮತ್ತು ಶುಲ್ಕೇತರ ಆದಾಯ ಕಲ್ಪನೆಗಳ ಯೋಜನೆಯ (ಐಎನ್ಎಫ್ಆರ್​ಐಎಸ್) ಭಾಗವಾಗಿ ಬೋಗಿಯಲ್ಲಿ ಎಟಿಎಂ ಅನ್ನು ಪರಿಚಯಿಸಲಾಗಿದೆ.

ಪ್ರಯೋಗ ಯಶಸ್ವಿ ಎಂದ ಅಧಿಕಾರಿಗಳು: ಭಾರತೀಯ ರೈಲ್ವೆಯ ಭುಸಾವಲ್ ವಿಭಾಗ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ ನಡುವಿನ ಸಹಯೋಗದೊಂದಿಗೆ ಈ ಎಟಿಎಂ ಸ್ಥಾಪಿಸಲಾಗಿದೆ. ಪ್ರಯಾಣದ ಉದ್ದಕ್ಕೂ ಯಂತ್ರವು ಸುಗಮವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಪ್ರಯೋಗವು ಯಶಸ್ವಿಯಾಗಿ ನಡೆಯಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲಲ್ಲಿ ಸಿಗ್ನಲ್​ ಸಮಸ್ಯೆ: ಆದಾಗ್ಯೂ, ಸುರಂಗಗಳು ಮತ್ತು ಸೀಮಿತ ಮೊಬೈಲ್ ಸಂಪರ್ಕದಿಂದಾಗಿ ಕಳಪೆ ಸಿಗ್ನಲ್​ಗೆ ಹೆಸರುವಾಸಿಯಾದ ಇಗತ್ಪುರಿ ಮತ್ತು ಕಸರಾ ನಡುವಿನ ಮಾರ್ಗದಲ್ಲಿ ಅಲ್ಪಕಾಲ ನೆಟ್ ವರ್ಕ್ ಸಮಸ್ಯೆಗಳು ಕಂಡು ಬಂದವು.

ಈ ಬಗ್ಗೆ ಮಾತನಾಡಿದ ಭುಸಾವಲ್​ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಇತಿ ಪಾಂಡೆ, “ಫಲಿತಾಂಶಗಳು ಉತ್ತಮವಾಗಿವೆ. ಜನರು ಈಗ ಪ್ರಯಾಣಿಸುವಾಗಲೇ ತಮ್ಮ ಖಾತೆಯಿಂದ ಹಣ ಡ್ರಾ ಮಾಡಲು ಸಾಧ್ಯವಾಗಲಿದೆ. ನಾವು ಎಟಿಎಂ ಯಂತ್ರದ ಕಾರ್ಯಕ್ಷಮತೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತೇವೆ.” ಎಂದು ಹೇಳಿದರು. ಭುಸಾವಲ್ ವಿಭಾಗ ಆಯೋಜಿಸಿದ್ದ ಐಎನ್​ಎಫ್​ಆರ್​ಐಎಸ್ (INFRIS) ಸಭೆಯಲ್ಲಿ ಮೊದಲ ಬಾರಿಗೆ ರೈಲಿನಲ್ಲಿ ಎಟಿಎಂ ಅಳವಡಿಸುವ ಕಲ್ಪನೆಯನ್ನು ಪ್ರಸ್ತಾಪಿಸಲಾಗಿತ್ತು ಎಂದು ಅವರು ತಿಳಿಸಿದರು.

ಎಟಿಎಂ ಅನ್ನು ಎಸಿ ಬೋಗಿಯಲ್ಲಿ ಅಳವಡಿಸಲಾಗಿದ್ದರೂ, ಪಂಚವಟಿ ಎಕ್ಸ್​ಪ್ರೆಸ್ ನ ಎಲ್ಲಾ 22 ಬೋಗಿಗಳಲ್ಲಿನ ಪ್ರಯಾಣಿಕರು ಇದನ್ನು ಬಳಸಬಹುದು. ನಗದು ಡ್ರಾ ಮಾಡುವುದು ಮಾತ್ರವಲ್ಲದೇ ಪ್ರಯಾಣಿಕರು ಚೆಕ್ ಪುಸ್ತಕಗಳನ್ನು ಆರ್ಡರ್ ಮಾಡಲು ಮತ್ತು ಖಾತೆ ಸ್ಟೇಟ್ ಮೆಂಟ್​ಗಳನ್ನು ಪಡೆಯಲು ಎಟಿಎಂ ಬಳಸಬಹುದು.

ದಿನದ 24 ಗಂಟೆ ಸಿಸಿಟಿವಿ ಕಣ್ಗಾವಲು: ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಟಿಎಂಗೆ ಶಟರ್ ಅಳವಡಿಸಲಾಗಿದೆ ಮತ್ತು ದಿನದ 24 ಗಂಟೆಯೂ ಸಿಸಿಟಿವಿ ಕ್ಯಾಮೆರಾಗಳಿಂದ ಮೇಲ್ವಿಚಾರಣೆ ಮಾಡಲಾಗುತ್ತದೆ. ಈ ಸೌಲಭ್ಯ ಪ್ರಯಾಣಿಕರಲ್ಲಿ ಜನಪ್ರಿಯವಾದರೆ ಸೇವೆಯನ್ನು ಮತ್ತಷ್ಟು ರೈಲುಗಳಿಗೆ ವಿಸ್ತರಿಸಬಹುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.