Bank Holiday: ಇನ್ನು ಮೂರು ದಿನ ಬ್ಯಾಂಕ್‌ ಕಡೆ ಹೋಗಲೇಬೇಡಿ: ಸಾಲು ಸಾಲು ರಜೆ

ಬ್ಯಾಂಕ್‌ ಅಲ್ಲಿ ಸಿಕ್ಕಾಪಟ್ಟೆ ಕೆಲಸ ಇದೆ, ಬೇಗ ಮುಗಿಸ್ಕೋಬೇಕು ಅಂತಿದ್ದರೆ ಇನ್ನೂ ಮೂರು ದಿನ ನಿಮ್ಮ ಕೆಲಸ ಆಗಲ್ಲ ಬಿಡಿ. ಏಕೆಂದರೆ ಇಂದಿನಿಂದ ಅಂದರೆ ಏಪ್ರಿಲ್ 29 ರಿಂದ ಮೇ 1 ರವರೆಗೆ ಸತತ ಮೂರು ದಿನಗಳ ಕಾಲ ಭಾರತದಲ್ಲಿ ಬ್ಯಾಂಕ್‌ಗಳಿಗೆ ರಜೆ ಇದೆ.


ಶ್ರೀ ಪರಶುರಾಮ ಜಯಂತಿ, ಅಕ್ಷಯ ತೃತೀಯ-ಬಸವ ಜಯಂತಿ, ಮಹಾರಾಷ್ಟ್ರ ದಿನ ಮತ್ತು ಕಾರ್ಮಿಕ ದಿನಾಚರಣೆಯ ನಿಮಿತ್ತ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ ಇದೆ. ಈ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ. ಆದ್ದರಿಂದ ಗ್ರಾಹಕರು ತಮ್ಮ ರಾಜ್ಯಗಳಲ್ಲಿನ ಬ್ಯಾಂಕ್ ರಜಾದಿನಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಚೆಕ್‌ ಮಾಡಿಕೊಳ್ಳುವ ಮೂಲಕ ನಿಮ್ಮೂರಿನ ಬ್ಯಾಂಕ್‌ಗಳಿಗೆ ರಜೆ ಇದೆಯೋ ಇಲ್ಲವೋ ಅಂತಾ ಚೆಕ್‌ ಮಾಡಿಕೊಂಡೆ ಬ್ಯಾಂಕ್‌ಗೆ ಭೇಟಿ ನೀಡಿ.

ಆರ್‌ಬಿಐ ವೆಬ್‌ಸೈಟ್ ಪ್ರಕಾರ, ಶ್ರೀ ಪರಶುರಾಮ ಜಯಂತಿಯ ಕಾರಣ ಇಂದು ಅಂದರೆ ಏಪ್ರಿಲ್ 29ರಂದು ಶಿಮ್ಲಾದಲ್ಲಿರುಬ ಬ್ಯಾಂಕುಗಳಿಗೆಲ್ಲಾ ರಜೆ ಘೋಷಣೆಯಾಗಿದೆ. ವಿಷ್ಣುವಿನ ಆರನೇ ಅವತಾರವಾದ ಪರಶುರಾಮನ ಜನ್ಮವನ್ನು ಗುರುತಿಸಿ ಇಲ್ಲಿ ಈ ದಿನವನ್ನು ಆಚರಿಸುತ್ತಾರೆ. ಅಧರ್ಮ ಮಾರ್ಗ ಹಿಡಿದಿದ್ದವರನ್ನು ಶಿಕ್ಷಿಸಿ ಧರ್ಮವನ್ನು ಕಾಪಾಡಿದ್ದಕ್ಕಾಗಿ ಪರಶುರಾಮನನ್ನು ಸ್ಮರಿಸಲಾಗುತ್ತದೆ. ಈ ದಿನದಂದು ಜನರು ಉಪವಾಸ ಆಚರಿಸುತ್ತಾರೆ ಮತ್ತು ವಿಷ್ಣುವಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.

ಏಪ್ರಿಲ್ 30 ರಂದು ರಜೆ

ಏಪ್ರಿಲ್ 30 ರಂದು ಬಸವ ಜಯಂತಿ ಅಕ್ಷಯ ತೃತೀಯ ಇರುವ ಕಾರಣ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ವಿಶೇಷವಾಗಿ ನಮ್ಮ ರಾಜ್ಯದ ಬ್ಯಾಂಕ್‌ಗಳಿಗೆ ಈ ದಿನ ರಜೆ ಇರುತ್ತದೆ. ಬಸವ ಜಯಂತಿ 12ನೇ ಶತಮಾನದ ಪ್ರಸಿದ್ಧ ತತ್ವಜ್ಞಾನಿ ಮತ್ತು ಸಮಾಜ ಸುಧಾರಕ ಬಸವಣ್ಣನವರ ಜನ್ಮವನ್ನು ಸ್ಮರಿಸುತ್ತದೆ. ಬಸವ ಜಯಂತಿಯನ್ನು ಪ್ರಾಥಮಿಕವಾಗಿ ನಮ್ಮಲ್ಲಿ ಮಾತ್ರ ಆಚರಿಸಲಾಗುತ್ತದೆ.

ಈ ಸಂದರ್ಭದಲ್ಲಿ ಜನರು ಲಿಂಗ ಸಮಾನತೆ, ಸಾಮಾಜಿಕ ಸುಧಾರಣೆಗಳು ಮತ್ತು ಸಾಮಾಜಿಕ ತಾರತಮ್ಯದ ನಿರ್ಮೂಲನೆ ಸೇರಿದಂತೆ ಬಸವಣ್ಣನವರ ಬೋಧನೆಗಳನ್ನು ಸ್ವೀಕರಿಸುತ್ತಾರೆ.

ಅಕ್ಷಯ ತೃತೀಯವು ಸಮೃದ್ಧಿ ಮತ್ತು ಅದೃಷ್ಟದೊಂದಿಗೆ ಸಂಬಂಧಿಸಿದೆ. ಅಕ್ಷಯ ತೃತ್ರೀಯ ದಿನದಂದು ಏನನ್ನೇ ಮಾಡಲಿ ಅದು ಅಕ್ಷಯವಾಗಲಿದೆ ಎಂಬ ನಂಬಿಕೆ ಇದೆ. ಈ ದಿನದಂದು ಮಾಡಿದ ಹೂಡಿಕೆಗಳು ಯಶಸ್ಸು ಮತ್ತು ಆರ್ಥಿಕ ಸ್ಥಿರತೆಗೆ ಕಾರಣವಾಗುತ್ತವೆ ಎಂಬ ನಂಬಿಕೆಯೊಂದಿಗೆ ಈ ಹಬ್ಬವನ್ನು ರಾಜ್ಯಾದ್ಯಂತ ಆಚರಿಸಲಾಗುತ್ತದೆ.

ಮೇ 1 ರಂದು ಮಹಾರಾಷ್ಟ್ರ ದಿನ ಮತ್ತು ಕಾರ್ಮಿಕರ ದಿನಾಚರಣೆ ಇರುವ ಕಾರಣ ಬೆಂಗಳೂರು, ಕೋಲ್ಕತ್ತಾ, ಮುಂಬೈ ಮತ್ತು ಪಾಟ್ನಾ ಸೇರಿದಂತೆ ಹೆಚ್ಚಿನ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ. ಮರಾಠಿ ಮಾತನಾಡುವ ಜನರ ಪ್ರತಿಭಟನೆಯ ನಂತರ ಗುಜರಾತ್ ಮತ್ತು ಮಹಾರಾಷ್ಟ್ರವನ್ನು ಬಾಂಬೆ ರಾಜ್ಯದಿಂದ ಬೇರ್ಪಡಿಸಿದ ದಿನವನ್ನು ಮಹಾರಾಷ್ಟ್ರ ದಿನವೆಂದು ಗುರುತಿಸಲಾಗುತ್ತದೆ.

ಇನ್ನು, ಕಾರ್ಮಿಕರ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರನ್ನು ಶೋಷಣೆಯಿಂದ ರಕ್ಷಿಸಲು ಅಂತರರಾಷ್ಟ್ರೀಯ ಕಾರ್ಮಿಕ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಈ ದಿನ ಬ್ಯಾಂಕ್‌ ಸೇರಿ ಹಲವು ಕ್ಷೇತ್ರದ ಕಾರ್ಮಿಕರಿಗೆ ರಜೆ ನಿಡಲಾಗುತ್ತದೆ.