ಐಪಿಎಲ್​ನಲ್ಲಿ ಸದ್ದು ಮಾಡುತ್ತಿರುವ ‘ರೋಬೋಟ್​ ಡಾಗ್’​ಗೆ ಇಟ್ಟ ಹೆಸರೇನು ಗೊತ್ತಾ?

ಈ ಬಾರಿಯ ಐಪಿಎಲ್​ನಲ್ಲಿ ರೋಬೋಟ್ ನಾಯಿ ವಿಶೇಷ ಆಕರ್ಷಣೆಯಾಗಿದೆ. ಪಂದ್ಯದ ಟಾಸ್ ಸಮಯದಲ್ಲಿ ಮೈದಾನದಲ್ಲಿ ಕಾಣಿಸಿಕೊಳ್ಳುವ ಇದು ಆಟಗಾರರು ಸೇರಿದಂತೆ ಪ್ರೇಕ್ಷಕರನ್ನು ರಂಜಿಸುತ್ತಿದೆ. ಆಟಗಾರರ ಬಳಿಗೆ ತೆರಳಿ ಅವರ ಕೈಕುಲುಕುವುದು, ನೃತ್ಯ ಮಾಡುವ ಮೂಲಕ ಗಮನ ಸೆಳೆಯುತ್ತಿದೆ.

ಈ ರೋಬೋ ಡಾಗ್​ನ ವರ್ತನೆಯನ್ನು ಜನರು ಉತ್ಸಾಹದಿಂದ ನೋಡುತ್ತಿದ್ದಾರೆ. ಹಲವಾರು ತಂಡಗಳ ಆಟಗಾರರು ಈ ರೋಬೋಟ್‌ ಡಾಗ್​ನೊಂದಿಗೆ ಮೋಜು ಮಾಡುತ್ತಿರುವ ವೀಡಿಯೊಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ.

ಭಾನುವಾರ ಮುಂಬೈ-ಚೆನ್ನೈ ಪಂದ್ಯ ಆರಂಭಕ್ಕೂ ಮುನ್ನ ರೋಬೋ ಡಾಗ್​ಗೆ ನಾಮಕರಣ ಮಾಡಲಾಗಿದ್ದು ಹೆಸರನ್ನು ರಿವೀಲ್​ ಮಾಡಲಾಗಿದೆ.

ರೋಬೋ ಡಾಗ್​ಗೆ ‘ಚಂಪಕ್​’ ಎಂದು ಹೆಸರಿಡಲಾಗಿದೆ. ಈ ಬಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಧಿಕೃತ ಎಕ್ಸ್​ ಖಾತೆಯಲ್ಲಿ ಘೋಷಣೆ ಮಾಡಲಾಗಿದೆ. ಇತ್ತೀಚಿನ ಸಮೀಕ್ಷೆಯಲ್ಲಿ ಹೆಚ್ಚಿನ ಪ್ರೇಕ್ಷಕರ ಮತಗಳ ಆಧಾರದ ಮೇಲೆ ರೋಬೋಟ್ ನಾಯಿಗೆ ಚಂಪಕ್ ಎಂದು ಹೆಸರಿಸಲಾಗಿದೆ ಎಂದು ಐಪಿಎಲ್‌ನ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಘೋಷಿಸಿದೆ. ಪೋಸ್ಟ್​ನಲ್ಲಿ ಮೀಟ್​ ‘ಚಂಪಕ್’ ಎಂದು ಬರೆಯಲಾಗಿದೆ.