ವಡೋದರಾ: ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಗುಜರಾ ತ್ನ ವಡೋದರಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಪತ್ತೆಹಚ್ಚಲಾಗಿದೆ. ಆತ ಮಾನಸಿಕ ಅಸ್ವಸ್ಥ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮುಂಬೈ ಸಂಚಾರಿ ಪೊಲೀಸರ ವಾಟ್ಸ್ಆ್ಯಪ್ ಸಹಾಯವಾಣಿಗೆ ಭಾನುವಾರ ಬೆದರಿಕೆ ಸಂದೇಶ ಬಂದಿತ್ತು. ಸಲ್ಮಾನ್ ಖಾನ್ ಅವರ ಕಾರು ಸ್ಫೋಟಿಸುವುದಾಗಿ ಮತ್ತು ಅವರ ಬಾಂದ್ರಾ ಮನೆಗೆ ನುಗ್ಗಿ ಅವರನ್ನು ಥಳಿಸುವುದಾಗಿಯೂ ಬೆದರಿಕೆ ಹಾಕಲಾಗಿತ್ತು.
ಈ ಸಂಬಂಧ ಮುಂಬೈನ ವರ್ಲಿ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಅಲ್ಲದೇ ಬಾಂದ್ರಾ ಪ್ರದೇಶದಲ್ಲಿರುವ ಸಲ್ಮಾನ್ ಖಾನ್ ನಿವಾಸದ ಹೊರಗೆ ಭದ್ರತೆಯನ್ನು ಬಿಗಿಗೊಳಿಸಿದ್ದರು.
ತನಿಖೆಯ ವೇಳೆ ವಡೋದರಾದ ವಾಘೋಡಿಯಾ ತಾಲೂಕಿನ ವ್ಯಕ್ತಿ ಬೆದರಿಕೆ ಸಂದೇಶ ಕಳುಹಿಸಿದ್ದಾರೆ ಎಂಬುವುದನ್ನು ಮುಂಬೈ ಪೊಲೀಸರು ಪತ್ತೆ ಮಾಡಿದ್ದಾರೆ. ವಾಘೋಡಿಯಾ ಪೊಲೀಸರೊಂದಿಗೆ ಮುಂಬೈ ಪೊಲೀಸರ ತಂಡವು ಸೋಮವಾರ ಶಂಕಿತನ ಮನೆಗೆ ತೆರಳಿದ್ದಾರೆ. ಆದರೆ ಸಂದೇಶ ಕಳುಹಿಸಿದ 26 ವರ್ಷದ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಆನಂದ್ ತಿಳಿಸಿದ್ದಾರೆ.
Follow Me