ಪಹಲ್ಗಾಮ್ ದಾಳಿ: ಉಗ್ರರ ಮಾಹಿತಿ ನೀಡಿದರೆ 20 ಲಕ್ಷ ರೂಪಾಯಿ ಬಹುಮಾನ!

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಅತ್ತ ಒಂದು ಕಡೆ ದಾಳಿಯಲ್ಲಿ ಮೃತಪಟ್ಟ ಪ್ರವಾಸಿಗರ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಇತ್ತ ದೇಶದ ಪ್ರಮುಖ ನಾಯಕರು ಉಗ್ರರ ದಾಳಿಗೆ ಪ್ರತೀಕಾರ ತೀರಿಸುವ ಬಗ್ಗೆ ಸಭೆ ನಡೆಸಲು ಮುಂದಾಗಿದ್ದಾರೆ. ಈಗಾಗಲೇ ಪೊಲೀಸ್ ಇಲಾಖೆ ಪಹಲ್ಗಾಮ್‌ ದಾಳಿಕೋರರ ಮಾಹಿತಿಯನ್ನು ರಿಲೀಸ್ ಮಾಡಿದ್ದು, ಉಗ್ರರ ಫೋಟೋ ಕೂಡಾ ಬಹಿರಂಗಪಡಿಸಿದ್ದಾರೆ. ಇದೀಗ ಪೊಲೀಸ್‌ ಇಲಾಖೆ ಮಹತ್ವದ ಘೋಷಣೆಯೊಂದನ್ನು ಮಾಡಿದ್ದು, ಒಂದು ವೇಳೆ ಭಯೋತ್ಪಾದಕರ ನಿಖರ ಮಾಹಿತಿ ನೀಡಿದ್ರೆ 20 ಲಕ್ಷ ಬಹುಮಾನ ನೀಡುವುದಾಗಿ ಹೇಳಿದ್ದಾರೆ.

ಪೊಲೀಸರ ಕ್ರಮ ಏನು?

ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ವ್ಯಾಲಿಯಲ್ಲಿ ಏಪ್ರಿಲ್ 22, 2025ರಂದು ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟರು. ಈ ದಾಳಿಯಿಂದ ಭಾರತದಲ್ಲಿ ಕೋಪದ ವಾತಾವರಣ ಸೃಷ್ಟಿಯಾಗಿದೆ.
ಟಿವಿ ವರದಿಗಳ ಪ್ರಕಾರ, ಈ ದಾಳಿಯಲ್ಲಿ ಭಾಗಿಯಾದ ಭಯೋತ್ಪಾದಕರ ಚಿತ್ರಗಳು ಬಿಡುಗಡೆಯಾಗಿವೆ. ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ವರದಿಯಂತೆ, ಭಯೋತ್ಪಾದಕರು “ಮೂಸಾ, ಯೂನಸ್ ಮತ್ತು ಆಸಿಫ್” ಎಂಬ ಕೋಡ್ ಹೆಸರನ್ನು ಬಳಸಿದ್ದಾರೆ.

ಇದೀಗ ಭಯೋತ್ಪಾದಕ ದಾಳಿಯ ಹಿಂದಿರುವ ಉಗ್ರರ ಬಗ್ಗೆ ಖಚಿತ ಮಾಹಿತಿ ನೀಡಿದವರಿಗೆ 20 ಲಕ್ಷ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.

ಈಗಾಗಲೇ ದಾಳಿಯಲ್ಲಿ ಭಾಗಿಯಾದ ಮೂವರು ಭಯೋತ್ಪಾದಕರ ಸ್ಕೆಚ್‌ಗಳನ್ನು ಸಹ ಏಪ್ರಿಲ್ 23, 2025 ರಂದು ಪೊಲೀಸರು ಬಿಡುಗಡೆ ಮಾಡಿದ್ದಾರೆ, ಇವುಗಳು ಪ್ರತ್ಯಕ್ಷದರ್ಶಿಗಳ ವಿವರಣೆಯ ಆಧಾರದ ಮೇಲೆ ತಯಾರಿಸಲ್ಪಟ್ಟಿವೆ. ಈಗಾಗಲೇ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆಯನ್ನು ವಹಿಸಿಕೊಂಡಿದ್ದು, ಸ್ಥಳೀಯ ಪೊಲೀಸರೊಂದಿಗೆ ಸೇರಿಕೊಂಡು ತನಿಖೆ ನಡೆಸುತ್ತಿದೆ.