ಪೋಪ್ ಫ್ರಾನ್ಸಿಸ್ ನಿಧನ: ಮುಂದಿನ ಪೋಪ್ ಯಾರು? ಹೇಗಿರಲಿದೆ ಆಯ್ಕೆ ಪ್ರಕ್ರಿಯೆ?

ವ್ಯಾಟಿಕನ್: ಪೋಪ್ ಫ್ರಾನ್ಸಿಸ್ ಅವರ ಮರಣದಿಂದಾಗಿ ಕ್ಯಾಥೋಲಿಕ್‌ ಗಳ ಅತ್ಯುನ್ನತ ಧರ್ಮಗುರುವಿನ ಹುದ್ದೆ ಖಾಲಿಯಾಗಿದ್ದು, ಇದನ್ನು ವ್ಯಾಟಿಕನ್‌ ನಲ್ಲಿ ದೀರ್ಘ ಪ್ರಕ್ರಿಯೆಯ ಮೂಲಕ ಭರ್ತಿ ಮಾಡಬೇಕಾಗಿದೆ.

ಪೋಪ್ ಫ್ರಾನ್ಸಿಸ್ ನಿಧನರಾಗಿದ್ದು ಮುಂದಿನ ಪ್ರಕ್ರಿಯೆಗಳೇನು? ವ್ಯಾಟಿಕನ್ ನಿಯಮಗಳು ಏನು ಹೇಳುತ್ತವೆ ಎಂಬ ಬಗ್ಗೆ ವಿವರಣೆ ಇಲ್ಲಿದೆ…

88 ವರ್ಷದ ಪೋಪ್, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಒಂದು ತಿಂಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿದ್ದರು.

ಕ್ಯಾಮೆರ್ಲೆಂಗೊ (ವ್ಯಾಟಿಕನ್‌ನ ಆಸ್ತಿ ಮತ್ತು ಆದಾಯದ ಆಡಳಿತಾಧಿಕಾರಿ ವಿಭಾಗ) ಮೊದಲು ಸಾವನ್ನು ಪರಿಶೀಲಿಸುತ್ತಾರೆ. ಅವರು ಪೋಪ್‌ನ ಬ್ಯಾಪ್ಟಿಸಮ್ ಹೆಸರನ್ನು ಮೂರು ಬಾರಿ ಕರೆಯುತ್ತಾರೆ. ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದರೆ, ಪೋಪ್ ನಿಧನರಾಗಿದ್ದಾರೆ ಎಂದು ಅವರು ಘೋಷಿಸುತ್ತಾರೆ. ಪೋಪ್ ಮರಣದ ನಂತರ ಅವರ ಹಣೆಯನ್ನು ತಟ್ಟಲು ಸಣ್ಣ ಬೆಳ್ಳಿ ಸುತ್ತಿಗೆಯನ್ನು ಬಳಸುವ ಪದ್ಧತಿ ಇತ್ತು. ಆದರೆ ಇದು 1963 ರ ನಂತರ ಕೊನೆಗೊಂಡಿತು.ನಂತರ ವ್ಯಾಟಿಕನ್ ತನ್ನ ಅಧಿಕೃತ ಮಾರ್ಗಗಳ ಮೂಲಕ ಪೋಪ್ ನಿಧನರಾಗಿದ್ದಾರೆ ಎಂದು ಜಗತ್ತಿಗೆ ತಿಳಿಸುತ್ತದೆ.

ನಂತರ ಪೋಪ್ ಅಪಾರ್ಟ್ಮೆಂಟ್ ನ್ನು ಕ್ಯಾಮೆರ್ಲೆಂಗೊ ಲಾಕ್ ಮಾಡುತ್ತದೆ. ಹಿಂದಿನ ಕಾಲಗಳಲ್ಲಿ ಲೂಟಿ ಮಾಡುವುದನ್ನು ತಡೆಯಲು ಈ ರೀತಿಯ ಕ್ರಮ ವಹಿಸಲಾಗುತ್ತಿತ್ತು ಮಾಡಲಾಗುತ್ತಿತ್ತು. ಕ್ಯಾಮೆರ್ಲೆಂಗೊ ಫಿಶರ್ ಮ್ಯಾನ್ ಉಂಗುರ ಮತ್ತು ಪೋಪ್ ಅವರ ಮುದ್ರೆಯನ್ನು ನಾಶಮಾಡಲು ವ್ಯವಸ್ಥೆ ಮಾಡುತ್ತದೆ. ಇದು ಆ ನಿರ್ದಿಷ್ಟ ಪೋಪ್ ಅವರ ಆಳ್ವಿಕೆಯ ಅಂತ್ಯವನ್ನು ಸಂಕೇತಿಸುತ್ತದೆ.

ಆರು ದಿನದೊಳಗೆ ಪೋಪ್ ಅಂತ್ಯಕ್ರಿಯೆ
ಪೋಪ್​ ಸ್ವರ್ಗಸ್ಥರಾದ ಬಳಿಕ 4-6 ದಿನದೊಳಗೆ ಅಂತ್ಯಕ್ರಿಯೆ ನಡೆಯಬೇಕು. ಎಲ್ಲಿ ಮಣ್ಣು ಮಾಡಬೇಕೆಂದು ಪೋಪ್ ಬದುಕಿದ್ದಾಗಲೇ ನಿರ್ಧರಿಸಬಹುದು. ಹಾಗೊಂದು ವೇಳೆ ಆ ನಿರ್ಧಾರ ಆಗಿಲ್ಲದೇ ಇದ್ದಲ್ಲಿ, ಅವರ ನಿಧನದ ಬಳಿಕ ವ್ಯಾಟಿಕನ್​​ನಲ್ಲಿರುವ ಸೇಂಟ್ ಪೀಟರ್ಸ್ ಬ್ಯಾಸಿಲಿಕಾದಲ್ಲಿ ಮಣ್ಣು ಮಾಡಲಾಗುತ್ತದೆ. ಅಂತ್ಯಕ್ರಿಯೆ ಬಳಿಕ 9 ದಿನ ಶೋಕಾಚರಣೆ ನಡೆಯುತ್ತದೆ. ಎಲ್ಲಾ ಕ್ಯಾಥೋಲಿಕ್ ಚರ್ಚ್​​ಗಳಲ್ಲೂ ಮೌನಾಚರಣೆ ಏರ್ಪಡಿಸಲಾಗುತ್ತದೆ.

ಹೊಸ ಪೋಪ್ ​​ನ ಆಯ್ಕೆ ಹೇಗೆ?
ಪೋಪ್ ಆಯ್ಕೆ ಪ್ರಜಾತಾಂತ್ರಿಕ ರೀತಿಯಲ್ಲಿ ಜರುತ್ತದೆ. ಪೋಪ್ ನಿಧನವಾಗಿ ಅಂತ್ಯಕ್ರಿಯೆ ಮುಗಿದು, ಶೋಕಾಚರಣೆ ಸಮಾಪ್ತಿಗೊಂಡ ಬಳಿಕ ಹೊಸ ಪೋಪ್ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಸಾಮಾನ್ಯವಾಗಿ ಇದು ಪೋಪ್ ನಿಧನದ 15-20 ದಿನದಲ್ಲಿ ಪ್ರಕ್ರಿಯೆ ಆರಂಭವಾಗುತ್ತದೆ.

80 ವರ್ಷದೊಳಗಿನ ವಯಸ್ಸಿನ ಎಲ್ಲಾ ಕಾರ್ಡಿನಲ್​​ಗಳು ವ್ಯಾಟಿಕನ್​​ನಲ್ಲಿ ಸೇರಿ ಹೊಸ ಪೋಪ್ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡುತ್ತಾರೆ. ಇದು ಬಹಳ ರಹಸ್ಯವಾಗಿ ನಡೆಯುತ್ತದೆ. ಹೊರಗಿನ ಯಾರೂ ಕೂಡ ಸಮೀಪಕ್ಕೆ ಬರುವಂತಿಲ್ಲ. ಎಲ್ಲಾ ಕಾರ್ಡಿನಲ್​​ಗಳ ಫೋನ್ ಸಂಪರ್ಕ ಕಟ್ ಆಗಿರುತ್ತದೆ.

ಹೊಸ ಪೋಪ್ ಆಗಬೇಕೆನ್ನುವ ವ್ಯಕ್ತಿಗಳ ಹೆಸರು ಇರುತ್ತದೆ. ಈ ಕಾರ್ಡಿನಲ್​​ಗಳು ಮತದಾನದ ಮೂಲಕ ಹೊಸ ಪೋಪ್ ಆಯ್ಕೆ ಮಾಡುತ್ತಾರೆ. ಹಲವು ಸುತ್ತುಗಳ ಮತದಾನ ನಡೆಯುತ್ತದೆ. ಇಲ್ಲಿ ಮತಪತ್ರ ಬಳಕೆ ಆಗುತ್ತದೆ. ಒಬ್ಬ ಅಭ್ಯರ್ಥಿಗೆ ಮೂರನೇ ಎರಡರಷ್ಟು ಬಹುಮತ ಸಿಗುವವರೆಗೂ ವೋಟಿಂಗ್ ನಡೆಯುತ್ತದೆ. ಹೊಸ ಪೋಪ್ ಯಶಸ್ವಿಯಾಗಿ ಆಯ್ಕೆಯಾದ ಬಳಿಕ ಬಿಳಿ ಹೊಗೆಯನ್ನು ಹೊರಗೆ ಹಾಯಿಸಲಾಗುತ್ತದೆ.

ಪೋಪ್ ಆಗಿ ಆಯ್ಕೆಯಾದವರ ಮೂಲ ಹೆಸರನ್ನು ಕೈಬಿಡಲಾಗುತ್ತದೆ. ಶತಮಾನಗಳ ಹಿಂದೆ ಧರ್ಮಗುರುಗಳಾಗಿದ್ದವರ ಹೆಸರನ್ನೇ ಹೊಸ ಪೋಪ್​​ಗೂ ಇಡಲಾಗುತ್ತದೆ.

ಈಗ ಸ್ವರ್ಗಸ್ಥರಾದ ಪೋಪ್ ಫ್ರಾನ್ಸಿಸ್ ಅವರ ಮೂಲ ಹೆಸರು ಜಾರ್ಜೆ ಮಾರಿಯೋ ಬರ್ಗೋಗ್ಲಿಯೋ. ಪೋಪ್ ಆಗಿ ಆಯ್ಕೆಯಾದ ಬಳಿಕ ಧರ್ಮಗುರು ಫ್ರಾನ್ಸಿಸ್ ಅವರ ಹೆಸರನ್ನು ಅವರಿಗೆ ಇಡಲಾಯಿತು.