ವಿಮಾನಕ್ಕೆ ಗುದ್ದಿದ ಟಿಟಿ ವಾಹನ: ಕೆಂಪೇಗೌಡ ಏರ್​​ಪೋರ್ಟ್ ಮಂಡಳಿ ಕೊಟ್ಟ ಸ್ಪಷ್ಟನೆ ಏನು?

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಸಾಲು ಸಾಲು ಅಪಘಾತಗಳು ಸಂಭವಿಸಿವೆ.

ಕೆಟ್ಟು ನಿಂತಿದ್ದ ವಿಮಾನಕ್ಕೆ ಟಿಟಿ ವಾಹನ ಡಿಕ್ಕಿ ಹೊಡೆದಿದೆ. ಬಳಿಕ ಚಾಲಕನ ನಿಯಂತ್ರಣ ತಪ್ಪಿ ರನ್ ವೇನಲ್ಲಿರುವ ಕಂಬಕ್ಕೆ ಕಾರೊಂದು ಡಿಕ್ಕಿ ಹೊಡೆದಿರುವಂತಹ ಘಟನೆ ಕೂಡ ನಡೆದಿದೆ. ಸದ್ಯ ಈ ಎರಡು ಘಟನೆಗಳಿಂದು ಏರ್​ಪೋರ್ಟ್​ ಆಡಳಿತ ಮಂಡಳಿ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.

ಈ ಬೆನ್ನಲ್ಲೇ ಮುಂದಿನ ದಿನಗಳಲ್ಲಿ ಮತ್ತಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ?
ಘಟನೆ ಬಗ್ಗೆ ಕೆಂಪೇಗೌಡ ಏರ್​​ಪೋರ್ಟ್​ ಆಡಳಿತ ಮಂಡಳಿಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಏ.18ರ ಮಧ್ಯಾಹ್ನ 12.15ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಕಾಂಟ್ರ್ಯಾಕ್ಟ್ ಏಜೆನ್ಸಿ ಕಡೆಯ ಚಾಲಕ ಟಿಟಿ ವಾಹನವನ್ನು ಚಲಾಯಿಸಿಕೊಂಡು ಕೆಟ್ಟು ನಿಂತಿದ್ದ ವಿಮಾನದ ಬಳಿ ಬಂದಿದ್ದು, ಫ್ಲೈಟ್​​ಗೆ ಟಿಟಿ ವಾಹನದ ಮೇಲ್ಭಾಗ ತಗುಲಿ ಡ್ಯಾಮೇಜ್ ಆಗಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾನೆ.

ತಕ್ಷಣ ನಮ್ಮ ಸಿಬ್ಬಂದಿ ಮುನ್ನೆಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಘಟನೆ ಕುರಿತು ಈಗಾಗಲೇ ಡಿಜಿಸಿಎಗೆ ಮಾಹಿತಿ ರವಾನಿಸಿದ್ದೇವೆ. ಪ್ರಯಾಣಿಕರಿಗೆ ಹಾಗೂ ವಿಮಾನಗಳ ಹಾರಾಟಕ್ಕೆ ಅಡಚಣೆಯಾಗಿಲ್ಲ. ಪ್ರಯಾಣಿಕರು, ಸಿಬ್ಬಂದಿ, ಏರ್​​​​ಲೈನ್ಸ್​​ನ ಸುರಕ್ಷತೆ ನಮ್ಮ ಆದ್ಯತೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದೇ ರೀತಿ ಕಳೆದ ವರ್ಷ ಟರ್ಮಿನಲ್ 2 ರಿಂದ 1 ಕ್ಕೆ ಬರುತ್ತಿದ್ದ ಶೆಟಲ್ ಬಸ್ ಸಹ ಅಪಘಾತಕ್ಕೆ ಒಳಾಗಾಗಿ 10 ಜನ ಪ್ರಯಾಣಿಕರು ಗಾಯಗೊಂಡಿದ್ದರು. ಏರ್​ಪೋರ್ಟ್​ನಲ್ಲಿ ಸಾಲು ಸಾಲು ಅಪಘಾತಗಳು ಸಂಭವಿಸುತ್ತಿದ್ದು, ಏರ್​ಪೋರ್ಟ್​ ಸಿಬ್ಬಂದಿಗೆ ಅಧಿಕ ಒತ್ತಡ ಹಾಗೂ ಒಟಿಗಳನ್ನ ಹೆಚ್ಚಾಗಿ ಮಾಡಿಸುವ ಕಾರಣ ಈ ರೀತಿ ಅಪಘಾತಗಳು ಸಂಭವಿಸುತ್ತಿವೆ ಎಂದು ಏರ್​ಪೋರ್ಟ್​ ಸಿಬ್ಬಂದಿಗಳು ಸಹ ಪರೋಕ್ಷವಾಗಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಒಟ್ಟಾರೆ ಸೂಕ್ಷ್ಮ ಪ್ರದೇಶವಾದ ಕೆಂಪೇಗೌಡ ಏರ್​ಪೋರ್ಟ್​ ರನ್ ವೇನಲ್ಲಿ ಈ ರೀತಿ ಪದೇ ಪದೇ ಅಪಘಾತಗಳಾಗುತ್ತಿದ್ದು, ದೊಡ್ಡ ದೊಡ್ಡ ಅನಾಹುತಗಳು ಕೂದಲಳತೆ ಅಂತರದಿಂದ ತಪ್ಪುತ್ತಿದೆ. ಇನ್ನಾದರೂ ಏರ್​ಪೋರ್ಟ್ ಆಡಳಿತ ಮಂಡಳಿ ಎಚ್ಚೆತ್ತು ಮತ್ತೊಮ್ಮೆ ಇಂತಹ ಅವಘಡಗಳು ಆಗದಂತೆ ಎಚ್ಚರಿಕೆ ವಹಿಸಬೇಕಿದೆ.