ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಸಾಲು ಸಾಲು ಅಪಘಾತಗಳು ಸಂಭವಿಸಿವೆ.
ಕೆಟ್ಟು ನಿಂತಿದ್ದ ವಿಮಾನಕ್ಕೆ ಟಿಟಿ ವಾಹನ ಡಿಕ್ಕಿ ಹೊಡೆದಿದೆ. ಬಳಿಕ ಚಾಲಕನ ನಿಯಂತ್ರಣ ತಪ್ಪಿ ರನ್ ವೇನಲ್ಲಿರುವ ಕಂಬಕ್ಕೆ ಕಾರೊಂದು ಡಿಕ್ಕಿ ಹೊಡೆದಿರುವಂತಹ ಘಟನೆ ಕೂಡ ನಡೆದಿದೆ. ಸದ್ಯ ಈ ಎರಡು ಘಟನೆಗಳಿಂದು ಏರ್ಪೋರ್ಟ್ ಆಡಳಿತ ಮಂಡಳಿ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.
ಈ ಬೆನ್ನಲ್ಲೇ ಮುಂದಿನ ದಿನಗಳಲ್ಲಿ ಮತ್ತಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ?
ಘಟನೆ ಬಗ್ಗೆ ಕೆಂಪೇಗೌಡ ಏರ್ಪೋರ್ಟ್ ಆಡಳಿತ ಮಂಡಳಿಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಏ.18ರ ಮಧ್ಯಾಹ್ನ 12.15ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಕಾಂಟ್ರ್ಯಾಕ್ಟ್ ಏಜೆನ್ಸಿ ಕಡೆಯ ಚಾಲಕ ಟಿಟಿ ವಾಹನವನ್ನು ಚಲಾಯಿಸಿಕೊಂಡು ಕೆಟ್ಟು ನಿಂತಿದ್ದ ವಿಮಾನದ ಬಳಿ ಬಂದಿದ್ದು, ಫ್ಲೈಟ್ಗೆ ಟಿಟಿ ವಾಹನದ ಮೇಲ್ಭಾಗ ತಗುಲಿ ಡ್ಯಾಮೇಜ್ ಆಗಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾನೆ.
ತಕ್ಷಣ ನಮ್ಮ ಸಿಬ್ಬಂದಿ ಮುನ್ನೆಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಘಟನೆ ಕುರಿತು ಈಗಾಗಲೇ ಡಿಜಿಸಿಎಗೆ ಮಾಹಿತಿ ರವಾನಿಸಿದ್ದೇವೆ. ಪ್ರಯಾಣಿಕರಿಗೆ ಹಾಗೂ ವಿಮಾನಗಳ ಹಾರಾಟಕ್ಕೆ ಅಡಚಣೆಯಾಗಿಲ್ಲ. ಪ್ರಯಾಣಿಕರು, ಸಿಬ್ಬಂದಿ, ಏರ್ಲೈನ್ಸ್ನ ಸುರಕ್ಷತೆ ನಮ್ಮ ಆದ್ಯತೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದೇ ರೀತಿ ಕಳೆದ ವರ್ಷ ಟರ್ಮಿನಲ್ 2 ರಿಂದ 1 ಕ್ಕೆ ಬರುತ್ತಿದ್ದ ಶೆಟಲ್ ಬಸ್ ಸಹ ಅಪಘಾತಕ್ಕೆ ಒಳಾಗಾಗಿ 10 ಜನ ಪ್ರಯಾಣಿಕರು ಗಾಯಗೊಂಡಿದ್ದರು. ಏರ್ಪೋರ್ಟ್ನಲ್ಲಿ ಸಾಲು ಸಾಲು ಅಪಘಾತಗಳು ಸಂಭವಿಸುತ್ತಿದ್ದು, ಏರ್ಪೋರ್ಟ್ ಸಿಬ್ಬಂದಿಗೆ ಅಧಿಕ ಒತ್ತಡ ಹಾಗೂ ಒಟಿಗಳನ್ನ ಹೆಚ್ಚಾಗಿ ಮಾಡಿಸುವ ಕಾರಣ ಈ ರೀತಿ ಅಪಘಾತಗಳು ಸಂಭವಿಸುತ್ತಿವೆ ಎಂದು ಏರ್ಪೋರ್ಟ್ ಸಿಬ್ಬಂದಿಗಳು ಸಹ ಪರೋಕ್ಷವಾಗಿ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಒಟ್ಟಾರೆ ಸೂಕ್ಷ್ಮ ಪ್ರದೇಶವಾದ ಕೆಂಪೇಗೌಡ ಏರ್ಪೋರ್ಟ್ ರನ್ ವೇನಲ್ಲಿ ಈ ರೀತಿ ಪದೇ ಪದೇ ಅಪಘಾತಗಳಾಗುತ್ತಿದ್ದು, ದೊಡ್ಡ ದೊಡ್ಡ ಅನಾಹುತಗಳು ಕೂದಲಳತೆ ಅಂತರದಿಂದ ತಪ್ಪುತ್ತಿದೆ. ಇನ್ನಾದರೂ ಏರ್ಪೋರ್ಟ್ ಆಡಳಿತ ಮಂಡಳಿ ಎಚ್ಚೆತ್ತು ಮತ್ತೊಮ್ಮೆ ಇಂತಹ ಅವಘಡಗಳು ಆಗದಂತೆ ಎಚ್ಚರಿಕೆ ವಹಿಸಬೇಕಿದೆ.
Follow Me