►ಸಾರಿಗೆ ಜಗತ್ತಿನಲ್ಲಿ ಹೊಸ ಕ್ರಾಂತಿ ಮಾಡುತ್ತಾ ಈ ಪ್ಲ್ಯಾನ್?
ಮುಂಬೈ: ಭಾರತ ಮತ್ತು ದುಬೈ ನಡುವೆ ಸಮುದ್ರ ಇರುವುದರಿಂದ ಜನರ ಸಂಚಾರಕ್ಕೆ ವಿಮಾನವನ್ನೇ ಆಶ್ರಯಿಸಬೇಕು. ಆದರೆ ಸಮುದ್ರ ಒಳಗಡೆಯೇ ಆಧುನಿಕ ತಂತ್ರಜ್ಞಾನ ಬಳಸಿ ಮುಂಬೈನಿಂದ ನೇರವಾಗಿ ದುಬೈ ನಗರಕ್ಕೆ ರೈಲ್ವೇ ನೆಟ್ವರ್ಕ್ ಅಳವಡಿಸಿದರೆ ಹೇಗಿರಬಹುದು. ಹೀಗೊಂದು ಚಿಂತನೆ ಕೇವಲ ಕಾಲ್ಪನಿಕ ಕತೆಯಾಗಿ ಉಳಿದಿಲ್ಲ. ದುಬೈ ಮತ್ತು ಮುಂಬೈ ನಡುವೆ ಇಂಥದ್ದೊಂದು ರೈಲ್ ನೆಟ್ವರ್ಕ್ ಸ್ಥಾಪಿಸಲು ಯೋಜನೆ ರೂಪಿಸಲಾಗುತ್ತಿದ್ದು, ಜನರ ಗಮನ ಸೆಳೆದಿದೆ.
ಮುಂಬೈನಿಂದ ದುಬೈಗೆ ಸುರಂಗ ಮಾರ್ಗದ ಮೂಲಕ ಸಮುದ್ರದೊಳಗೆ ರೈಲು ಮಾರ್ಗ ನಿರ್ಮಿಸಲು ಸಿದ್ಧತೆ ನಡೆಯುತ್ತಿದೆ. ಸ್ಟಾರ್ಟ್ ಅಪ್, ವ್ಯಾಪಾರ ಯೋಜನೆಗಳಿಗೆ ಹೆಸರುವಾಸಿಯಾಗಿರುವ ಯುಎಇ ಮೂಲದ ನ್ಯಾಷನಲ್ ಅಡ್ವೈಸರ್ ಬ್ಯೂರೋ ಲಿಮಿಟೆಡ್ (ಎನ್ಎಬಿಎಲ್) ಈ ಯೋಜನೆಯನ್ನ ಪ್ರಸ್ತಾಪಿಸಿದೆ. ಇದು ಭಾರತ ಮತ್ತು ಯುಎಇಯನ್ನು ಅರೇಬಿಯನ್ ಸಮುದ್ರದ ಸಂಪರ್ಕಿಸುತ್ತದೆ. ಈಗಾಗಲೇ ಸಿವಿಲ್ ಇಂಜಿನಿಯರರು ಇದಕ್ಕೆ ಕೆಲಸ ಮಾಡುತ್ತಿದ್ದು, ಅಂದಾಜು ವೆಚ್ಚ, ಮತ್ತಿತರ ಯೋಜನೆಯ ಕಾರ್ಯಸಾಧ್ಯತೆಗಳನ್ನ ಚರ್ಚಿಸುತ್ತಿದ್ದಾರೆ. ಸದ್ಯಕ್ಕೆ 21 ಶತಕೋಟಿ ಡಾಲರ್ ಅಂದಾಜು ವೆಚ್ಚ ಆಗಲಿದೆ ಎಂದು ಅಂದಾಜಿಸಲಾಗಿದೆ.
ಈ ಪರಿಕಲ್ಪನೆಯು ಮೊದಲಿಗೆ 2018ರಲ್ಲಿ ಬಂದಿತ್ತು. ಆದರೆ ಇತ್ತೀಚಿನ ತಿಂಗಳುಗಳಲ್ಲಿ ಅದರ ಚರ್ಚೆ ಮತ್ತೆ ತೀವ್ರಗೊಂಡಿದೆ ಎಂಬುದು ಗಮನಾರ್ಹ. ದುಬೈನ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದಾಗಲೂ ಈ ಬಗ್ಗೆ ಚರ್ಚಿಸಿದ್ದಾರೆ. ಜೊತೆಗೆ ಭಾರತ, ಅಮೆರಿಕ, ಯುಎಇ ನಡುವಿನ ಸಂಬಂಧ, ಆರ್ಥಿಕತೆಯನ್ನು ಅಭಿವೃದ್ಧಿ ಪಡಿಸುವ ಭವಿಷ್ಯದ ಯೋಜನೆಗಳ ಕುರಿತಾಗಿಯೂ ಚರ್ಚಿಸಿದ್ದಾರೆ. ಅಲ್ಲದೇ ಈ ಯೋಜನೆ ಇನ್ನೂ ಪರಿಕಲ್ಪನಾ ಹಂತದಲ್ಲಿದ್ದು, ಅನುಮೋದನೆ ಪಡೆಯಲು ತಯಾರಿ ನಡೆಲಸಾಗುತ್ತಿದೆ ಎಂದು ಯುಎಇ ಪತ್ರಿಕೆ ʻಖಲೀಜ್ ಟೈಮ್ಸ್ʼ ವರದಿ ಮಾಡಿದೆ.
ಏನಿದು ನಿರೋಳಗಿನ ರೈಲು ಯೋಜನೆ?
ನೀರಿನಾಳದಲ್ಲಿ ಸುರಂಗ ಮಾರ್ಗವೊಂದನ್ನು ನಿರ್ಮಿಸಿ ಆ ಮೂಲಕ ರೈಲು ಸಂಪರ್ಕ ಕಲ್ಪಿಸುವುದು. ಭಾರತ ಮತ್ತು ದುಬೈನ ಫುಜೈರಾಗೆ ಅತೀ ವೇಗದ ರೈಲು ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ. ಯುಎಇಯ ನ್ಯಾಷನಲ್ ಅಡ್ವೈಸರ್ ಬ್ಯೂರೋ ಲಿಮಿಟೆಡ್ ಸಂಸ್ಥೆಯು 6 ವರ್ಷಗಳ ಹಿಂದೆ ಅಬುಧಾಬಿಯಲ್ಲಿ ನಡೆದ ಯುಎಇ-ಇಂಡಿಯಾ ಕಾನ್ಕ್ಲೇವ್ ನಲ್ಲಿ ಈ ಯೋಜನೆಯ ಪರಿಕಲ್ಪನೆಯನ್ನು ಪ್ರಸ್ತಾಪಿಸಿತ್ತು. ಈ ಯೋಜನೆ ಆರ್ಥಿಕತೆಗೆ ಎನರ್ಜಿ ಬೂಸ್ಟರ್ ನೀಡುವ ಜೊತೆಗೆ ದ್ವಿಪಕ್ಷೀಯ ವ್ಯಾಪಾರ ಸಂಬಂಧಕ್ಕೆ ಉತ್ತೇಜನ ನೀಡುತ್ತದೆ. ಫುಜೂತಾ ಬಂದರಿನಿಂದ ಭಾರತಕ್ಕೆ ತೈಲವನ್ನು ನೇರವಾಗಿ ರಫ್ತು ಮಾಡಲು ಅನುಕೂಲವಾಗುತ್ತದೆ. ಈ ಯೋಜನೆಯನ್ನು ಪೂರ್ಣಗೊಳಿಸುವ ಉದ್ದೇಶದಿಂದಲೇ ಮುಂಬೈನ ಉತ್ತರಕ್ಕೆ ನರ್ಮದಾ ನದಿಯಿಂದ ಹೆಚ್ಚುವರಿ ನೀರನ್ನು ಹರಿಸಲಾಗುತ್ತದೆ. ಜೊತೆಗೆ ಇದು ಶೀಘ್ರ ಪ್ರಯಾಣಕ್ಕೂ ಅನುಕೂಲ ಮಾಡಿಕೊಡುತ್ತದೆ ಎಂದು ಉದ್ದೇಶಿಸಲಾಗಿದೆ.
ಮಿಂಚಿನಷ್ಟೇ ವೇಗ
ಸಮುದ್ರ ಮಾರ್ಗದಲ್ಲಿ ಹಾದುಹೋಗುವ ಈ ರೈಲು ಮಾರ್ಗ ಸುಮಾರು 2,000 ಕಿಮೀ ವ್ಯಾಪ್ತಿ ಹೊಂದಿರಲಿದೆ. ಅರೇಬಿಯನ್ ಸಮುದ್ರದ ಮೇಲ್ಮೈನಿಂದ 20-30 ಮೀಟರ್ ಆಳದಲ್ಲಿ ಸುರಂಗ ಮಾರ್ಗದ ಮೂಲಕ ಹಾದುಹೋಗಲಿದೆ. ಇಲ್ಲಿ ರೈಲು ಗಂಟೆಗೆ 600 ರಿಂದ 1 ಸಾವಿರ ಕಿಮೀ ವೇಗದಲ್ಲಿ ಚಲಿಸುತ್ತದೆ. ಜಪಾನ್, ಚೀನಾಗಳಲ್ಲಿ ಬುಲೆಟ್ ಟ್ರೈನ್ ಗೆ ಬಳಸಿದ ಮ್ಯಾಗ್ಲೆವ್ ತಂತ್ರಜ್ಞಾನ ಬಳಸಿ ಟ್ರ್ಯಾಕ್ ಮಾಡುವುದರಿಂದ ಇದರ ವೇಗ ಅತಿಹೆಚ್ಚಿನದ್ದಾಗಿಯೇ ಇರುತ್ತದೆ.
ಪ್ರಸ್ತುತ ವಿಮಾನದಲ್ಲಿ ಮುಂಬೈನಿಂದ ದುಬೈಗೆ ಸುಮಾರು 3 ಗಂಟೆ ಪ್ರಯಾಣ ಮಾಡಬೇಕಾಗುತ್ತದೆ. ಈ ಯೋಜನೆ ಪೂರ್ಣಗೊಂಡರೆ ಮುಂಬೈನಿಂದ ದುಬೈಗೆ ಕೇವಲ 2 ಗಂಟೆಗಳಲ್ಲಿ ಪ್ರಯಾಣಿಸಬಹುದು ಎಂದು ಅಂದಾಜಿಸಲಾಗಿದೆ.
Follow Me