ಭೂಮಿಯ ಮೇಲಿನ ಸ್ವರ್ಗ ಎಂದೇ ಕರೆಯಲಾಗುವ ಕಾಶ್ಮೀರದಲ್ಲಿ ಅತ್ಯದ್ಭುತ ಪ್ರವಾಸಿ ತಾಣಗಳಿವೆ. ನವ ಜೋಡಿಗಳ ಹನಿಮೂನ್ ಗೆ ಕಾಶ್ಮೀರ ಹೇಳಿ ಮಾಡಿಸಿದ ಜಾಗ ಅಂತಾನೇ ಹೇಳಬಹುದು. ಹಿಮದಿಂದ ಆವೃತವಾದ ಪರ್ವತಗಳು, ಸುಂದರ ಕಣಿವೆಗಳು ಬೆಟ್ಟಗುಡ್ಡಗಳು ಸೇರಿದಂತೆ ಇಲ್ಲಿ ಕಣ್ತುಂಬಿಕೊಳ್ಳಬಹುದಾದ ಹಲವು ತಾಣಗಳಿವೆ. ಇಲ್ಲಿನ ಪಹಲ್ಗಾಮ್, ಗುಲ್ಮಾರ್ಗ್, ಸೋನಾಮಾರ್ಗ್ ಇತ್ಯಾದಿ ಸ್ಥಳಗಳಿಗೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ.
ಕಾಶ್ಮೀರಕ್ಕೆ ಹೋಗುವ ಪ್ರವಾಸಿಗರು ಇಲ್ಲಿನ ಅತ್ಯಂತ ಸುಂದರ ತಾಣಗಳಲ್ಲಿ ಒಂದಾದ, ಭಾರತದ ಮಿನಿ ಸ್ವಿಟ್ಜರ್ ಲ್ಯಾಂಡ್ ಅಂತಾನೇ ಕರೆಯುವ ಪಹಲ್ಗಾಮ್ ಗೆ ತಪ್ಪದೆ ಭೇಟಿ ನೀಡುತ್ತಾರೆ. ಸಮುದ್ರ ಮಟ್ಟದಿಂದ ಸುಮಾರ 2130 ಮೀಟರ್ ಎತ್ತರದಲ್ಲಿರುವ ಪಹಲ್ಗಾಮ್ ಗಿರಿಧಾಮದಲ್ಲಿ ಸುಂದರ ಕಣಿವೆಗಳು, ದೇವದಾರು, ಪೈನ್ ಮರಗಳು, ಸುಂದರ ಬೆಟ್ಟ ಗುಡ್ಡಗಳಿದ್ದು, ಈ ಮಿನಿ ಸ್ವಿಟ್ಜರ್‌ಲ್ಯಾಂಡ್ ತನ್ನ ನೈಸರ್ಗಿಕ ಸೌಂದರ್ಯದಿಂದಲೇ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.
ಇಲ್ಲಿ ಎತ್ತರದ ದೇವದಾರು ಮತ್ತು ಪೈನ್ ಮರಗಳಿದ್ದು, ಈ ಮರಗಳು ವರ್ಷದ ಹೆಚ್ಚಿನ ಸಮಯ ಹಿಮದಿಂದಲೇ ಹೆಪ್ಪುಗಟ್ಟಿರುತ್ತದೆ. ವಿಶೇಷವಾಗಿ ಸಾಹಸ ಕ್ರೀಡೆ ಮತ್ತು ಚಾರಣಕ್ಕೆ ಹೇಳಿ ಮಾಡಿಸಿದಂತಹ ಸ್ಥಳ ಇದಾಗಿದ್ದು, ಇಲ್ಲಿ ಪ್ರತಿವರ್ಷ ಹಿಮ ಬೀಳುವ ಸಮಯದಲ್ಲಿ ಸ್ಕೀಯಿಂಗ್, ಕುದುರೆ ಸವಾರಿ, ಸ್ಲೆಡ್ಜಿಂಗ್ ಸೇರಿದಂತೆ ಹಲವು ಕ್ರೀಡೆಗಳನ್ನು ಪ್ರವಾಸಿಗರಿಗಾಗಿ ಆಯೋಜಿಸಲಾಗುತ್ತದೆ.
ಪಹಲ್ಗಾಮ್ ನಲ್ಲಿ ನೀಲಿ ಬಣ್ಣದಿಂದ ಆವೃತವಾಗಿರುವ ಶೇಷನಾಗ ಸರೋವರವಿದ್ದು, ಹಾವಿನ ರಾಜ ಶೇಷನಾಗ ಇದನ್ನು ರಚನೆ ಮಾಡಿದರು ಮತ್ತು ಇಂದಿಗೂ ಇಲ್ಲಿ ಶೇಷನಾಗ ವಾಸಿಸುತ್ತಿದ್ದಾರೆ ಎಂದು ನಂಬಲಾಗಿದೆ. ಅಮರನಾಥ ಯಾತ್ರೆಗೆ ಹೋಗುವ ಯಾತ್ರಾರ್ಥಿಗಳು ತಪ್ಪದೆ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಅಲ್ಲದೆ ಯಾತ್ರಾರ್ಥಿಗಳು ಇಲ್ಲಿನ ಚಂದನ್ವಾರಿ ಮತ್ತು ಮಾಮ್ಲೇಶ್ವರ ಶಿವ ದೇವಸ್ಥಾನಕ್ಕೂ ಭೇಟಿ ನೀಡುತ್ತಾರೆ.
ಪಹಲ್ಗಾಮ್‌ನಲ್ಲಿ ದಟ್ಟವಾದ ಮರಗಳಿಂದ ಆವೃತವಾದ ಸುಂದರ ಅರು ಕಣಿವೆಯಿದ್ದು, ಚಾರಣ ಮತ್ತು ಕುದುರೆ ಸವಾರಿಗಾಗಿಯೇ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಅಲ್ಲದೆ ಇಲ್ಲಿ ಮಂಜಿನಿಂದ ಆವೃತವಾದ ಟುಲಿಯನ್ ಸರೋವರ ಹಾಗೂ ದೇವದಾರು, ಪೈನ್ ಮರಗಳು ಹಾಗೂ ಸುಂದರ ನದಿ ಕಣಿವೆಗಳನ್ನು ಹೊಂದಿದ ಬೇತಾಲ್ ಕಣಿವೆಯೂ ಇದ್ದು, ಈ ಎಲ್ಲಾ ಸುಂದರ ತಾಣಗಳು ತನ್ನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲೆಂದೇ ಲಕ್ಷಾಂತರ ಪ್ರವಾಸಿಗರು ಪಹಲ್ಗಾಮ್‌ಗೆ ಭೇಟಿ ನೀಡುತ್ತಾರೆ.