ನವದೆಹಲಿ: ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡು ರಾಜತಾಂತ್ರಿಕ ಸಮರ ಸಾರಿರುವ ಭಾರತ, ವಿಶೇಷ ವೀಸಾದ ಮೂಲಕ ಭಾರತಕ್ಕೆ ಬಂದಿರುವ ಪಾಕಿಸ್ತಾನಿಗಳು ಕೇವಲ 48 ಗಂಟೆಗಳಲ್ಲಿ ಭಾರತ ಬಿಟ್ಟು ತೊಲಗುವಂತೆ ಆದೇಶಿಸಿದೆ. ಹೀಗಿರುವಾಗ ಅನಧಿಕೃತವಾಗಿ ಭಾರತಕ್ಕೆ ಬಂದು ಇಲ್ಲಿಯೇ ಮತ್ತೊಂದು ಮದುವೆಯಾಗಿ ಮಗುವನ್ನು ಕೂಡ ಹೆತ್ತಿರುವ ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾದ ಚರ್ಚೆಯಾಗುತ್ತಿದೆ. ಅಕ್ರಮವಾಗಿ ಭಾರತಕ್ಕೆ ಬಂದ ಆಕೆಯನ್ನು ಕೂಡ ಪಾಕಿಸ್ತಾನಕ್ಕೆ ಕಳುಹಿಸುವಂತೆ ಅನೇಕ ನೆಟ್ಟಿಗರು ಆಗ್ರಹಿಸುತ್ತಿದ್ದಾರೆ. ಹೀಗಿರುವಾಗ ಪಾಕಿಸ್ತಾನದಲ್ಲಿ ಆಕೆಯ ಮಾಜಿ ಪತಿ ಗುಲಾಂ ಹೈದರ್ ಅವರ ವೀಡಿಯೋವೊಂದು ವೈರಲ್ ಆಗಿದ್ದು, ಅವರೇನು ಅಂದಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಸೀಮಾ ಹೈದರ್ ಹಾಗೂ ಆಕೆಯನ್ನು ತಂಗಿಯಾಗಿ ದತ್ತು ಪಡೆದಿರುವ ಸುಪ್ರೀಂಕೋರ್ಟ್ ವಕೀಲ ಎಪಿ ಸಿಂಗ್ ವಿರುದ್ಧ ಕಿಡಿಕಾರಿರುವ ಗುಲಾಂ ಹೈದರ್ ಅವರು ಈಗಲಾದರು ಆಕೆ ಪಾಕಿಸ್ತಾನಕ್ಕೆ ಬರಬೇಕು. ನನಗೆ ನನ್ನ ಮಕ್ಕಳನ್ನು ನೋಡಬೇಕು. ನಾನು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾನೆ. ಅಲ್ಲದೇ ಸೀಮಾಳನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡುವಂತೆ ಆತ ಸರ್ಕಾರಕ್ಕೆ ಆಗ್ರಹಿಸಿದ್ದಾನೆ.
ಸೀಮಾ ಹೈದರ್ ಅವರ ಮೊದಲ ಪತಿ ಗುಲಾಮ್ ಹೈದರ್ ವೀಡಿಯೋವೊಂದನ್ನು ಮಾಡಿದ್ದು, ಅದರಲ್ಲಿ ಅವರು ಹೀಗೆ ಹೇಳಿದ್ದಾರೆ. ಇಂದಿಗೂ ನಾನು ಸೀಮಾ ಅವರನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಬೇಕೆಂದು ಹೇಳಲು ಬಯಸುತ್ತೇನೆ. ಕಳೆದ ಎರಡು ವರ್ಷಗಳಿಂದ ನಾನು ನನ್ನ ಮಕ್ಕಳಿಗಾಗಿ ಹಾತೊರೆಯುತ್ತಿದ್ದೇನೆ. ಭಾರತ ಸರ್ಕಾರ ನನ್ನ ಮಕ್ಕಳನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಬೇಕು. ಸೀಮಾಳನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸಾಧ್ಯವಾಗದಿದ್ದರೆ, ಅಲ್ಲಿಯೇ ಅವಳನ್ನು ಶಿಕ್ಷಿಸಿ. ಅವಳಿಗೆ ಸಹಾಯ ಮಾಡುತ್ತಿರುವವನಿಗೆ, ಅಂದರೆ ಅವಳ ದತ್ತು ಸಹೋದರ ಎಪಿ ಸಿಂಗ್‌ಗೆ ನಾಚಿಕೆಯಾಗಬೇಕು ಎಂದು ಸೀಮಾ ಹೈದರ್‌ಳ ಪಾಕಿಸ್ತಾನಿ ಪತಿ ವೀಡಿಯೋದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
ವಕೀಲ ಎಪಿ ಸಿಂಗ್ ಅವರಿಗೆ ನಾಚಿಕೆಗೇಡು. ಅವನೊಳಗೆ ಮಾನವೀಯತೆ ಸತ್ತುಹೋಗಿದೆ. ಅವನು ಮನುಷ್ಯ ಎಂದು ಕರೆಯಲು ಅರ್ಹನಲ್ಲ. ಸೀಮಾ ಅವನಿಗಿಂತಲೂ ಹೆಚ್ಚು ನಾಚಿಕೆಯಿಲ್ಲದವಳು. ನನ್ನ ಮಕ್ಕಳಿಗೆ ರಕ್ತಸಂಬಂಧವೂ ಇಲ್ಲದ ಸಚಿನ್ ಮತ್ತು ನೇತ್ರಪಾಲ್ ಅವರೊಂದಿಗೆ ಆಕೆ ಇದ್ದಾಳೆ. ಆದರೆ, ನನಗೆ ನನ್ನ ಮಕ್ಕಳೊಂದಿಗೆ ರಕ್ತಸಂಬಂಧವಿದೆ ಮತ್ತು ನನ್ನ ಮಕ್ಕಳಿಂದ ದೂರವಿರುವವನು ನಾನೇ ಎಂದು ಸೀಮಾಳ ಪಾಕಿಸ್ತಾನಿ ಪತಿ ಗುಲಾಂ ಹೈದರ್ ಬೇಸರ ವ್ಯಕ್ತಪಡಿಸಿದ್ದಾನೆ. ನನ್ನ ಮಕ್ಕಳನ್ನು ಮರಳಿ ಕಳುಹಿಸುವಂತೆ ಬೇಡಿಕೆ ಇಟ್ಟಿರುವ ಆತ, ಕಾಲಿನಲ್ಲಿದ್ದ ಚಪ್ಪಲಿಯನ್ನು ವೀಡಿಯೋದಲ್ಲಿ ತೋರಿಸಿದ್ದು, ಸೀಮಾ ಹಾಗೂ ವಕೀಲ ಎಪಿ ಸಿಂಗ್ ನನ್ನ ಮುಂದೆ ಬಂದರೆ ನಾನು ಅವರನ್ನು ಕೆಟ್ಟದಾಗಿ ಹೊಡೆಯುತ್ತೇನೆ ಎಂದು ಹೇಳಿದ್ದಾನೆ.
PUBG ಆಡುತ್ತಾ ಆನ್‌ಲೈನ್‌ನಲ್ಲಿ ಭಾರತದ ಯುವಕನೊಂದಿಗೆ ಸ್ನೇಹ ಸಂಪಾದಿಸಿದ ಸೀಮಾ ನಂತರ ಮೇ 2023 ರಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ಬಂದಿದ್ದಳು. ನಂತರ ಆಕೆ ಇಲ್ಲಿಯೇ ತನ್ನ ಗೆಳೆಯ ಸಚಿನ್ ಮೀನಾ ಎಂಬಾತನನ್ನು ಮದುವೆಯಾಗಿದ್ದು, ಗ್ರೇಟರ್ ನೋಯ್ಡಾದ ರಬುಪುರದಲ್ಲಿ ವಾಸಿಸುತ್ತಿದ್ದಾಳೆ. ಇವರಿಬ್ಬರಿಗೆ ಇತೀಚೆಗೆ ಒಂದು ಮಗುವೂ ಆಗಿದ್ದು, ಆ ಮಗುವಿಗೆ ಭಾರತೀ ಮೀನಾ ಎಂದು ಹೆಸರು ಕೂಡ ಇಡಲಾಗಿದೆ. ಹೀಗಿರುವಾಗ ಸೀಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ಇತ್ತೀಚಿನ ಆದೇಶದ ನಂತರ, ಸೀಮಾ ಹೈದರ್ ಕೂಡ ಭಾರತ ಬಿಟ್ಟು ಹೊರಡಬೇಕೇ ಎಂದು ಚರ್ಚೆ ನಡೆಯುತ್ತಿದೆ. ಏಕೆಂದರೆ ಸೀಮಾ ಭಾರತಕ್ಕೆ ಕಾನೂನುಬದ್ಧವಾಗಿ ಬಂದಿಲ್ಲ ಹಾಗೂ ಆಕೆಗೆ ಯಾವುದೇ ಭಾರತೀಯ ಪೌರತ್ವವಿಲ್ಲ. ಇತ್ತ ಪಹಲ್ಗಾಮ್ ಹಿಂಸಾಚಾರವನ್ನು ಭಾರತ ಗಂಭೀರವಾಗಿ ಪರಿಗಣಿಸಿದ್ದು, ಪಾಕಿಸ್ತಾನದ ಜೊತೆ ಭಾರತಕ್ಕೆ ಇದ್ದ ಏಕೈಕ ರಸ್ತೆ ಮಾರ್ಗ ವಾಘಾ ಗಡಿಯನ್ನು ಮುಚ್ಚಲಾಗಿದೆ.