RCB ಅಭಿಮಾನಿಗಳಿಗೆ ‘ಮುಟ್ಟಿ’ ನೋಡಿಕೊಳ್ಳುವಂತಹ ಉತ್ತರ ನೀಡಿದ ಶಿವಂ ದುಬೆ

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಗೆಲುವಿನ ಲಯಕ್ಕೆ ಮರಳಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧದ ಪಂದ್ಯದಲ್ಲಿ ಸಿಎಸ್​ಕೆ ತಂಡವು 5 ವಿಕೆಟ್​ಗಳ ಜಯ ಸಾಧಿಸಿತ್ತು. ಈ ಪಂದ್ಯವನ್ನು ವೀಕ್ಷಿಸಲು ಆರ್​ಸಿಬಿ ಅಭಿಮಾನಿಗಳು ಕೂಡ ಆಗಮಿಸಿದ್ದರು.

ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಶಿವಂ ದುಬೆ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ ಅಜೇಯ 43 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿ ದುಬೆ ಡ್ರೆಸ್ಸಿಂಗ್​ಗೆ ರೂಮ್​ಗೆ ಮರಳಿದ್ದರು. ಈ ವೇಳೆ ಗ್ಯಾಲರಿಯಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಶಿವಂ ದುಬೆ ಅವರನ್ನು ಟ್ರೋಲ್ ಮಾಡಿದ್ದಾರೆ.

ಇತ್ತ ಆರ್​ಸಿಬಿ ಜೆರ್ಸಿಯಲ್ಲಿ ಕಾಣಿಸಿಕೊಂಡ ಅಭಿಮಾನಿಗಳ ಹಿಯ್ಯಾಳಿಕೆ ಕೇಳಿಸುತ್ತಿದ್ದಂತೆ ಶಿವಂ ದುಬೆ ತನ್ನ ಜೆರ್ಸಿ ಮೇಲಿರುವ 5 ಸ್ಟಾರ್​ಗಳನ್ನು ತೋರಿಸಿ ತಿರುಗೇಟು ನೀಡಿದ್ದಾರೆ. ಈ ಐದು ಸ್ಟಾರ್​ಗಳು ಸಿಎಸ್​ಕೆ ತಂಡವು ಗೆದ್ದಿರುವ 5 ಟ್ರೋಫಿಗಳನ್ನು ಪ್ರತಿನಿಧಿಸುತ್ತದೆ. ಇದನ್ನೇ ತೋರಿಸಿ ಆರ್​ಸಿಬಿ ತಂಡ ಇನ್ನೂ ಸಹ ಕಪ್ ಗೆದ್ದಿಲ್ಲ ಎಂದು ದುಬೆ ಪರೋಕ್ಷವಾಗಿ ಕಾಲೆಳೆದಿದ್ದಾರೆ.ಇದೀಗ ಶಿವಂ ದುಬೆ ಅವರ ತಿರುಗೇಟಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಿಎಸ್​ಕೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳನ್ನು ಪಡೆದುಕೊಳ್ಳುತ್ತಿದೆ.

ಸತತ 5 ಸೋಲುಗಳ ಬಳಿಕ ಗೆಲುವು:

ಈ ಬಾರಿಯ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆ ಬಳಿಕ ಸತತ 5 ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಈ ಐದು ಪಂದ್ಯಗಳ ಬಳಿಕ ಇದೀಗ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 166 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 19.3 ಓವರ್​ಗಳಲ್ಲಿ 168 ರನ್ ಬಾರಿಸಿ 5 ವಿಕೆಟ್​ಗಳ ಗೆಲುವು ದಾಖಲಿಸಿದೆ. ಈ ಗೆಲುವಿನ ಹೊರತಾಗಿಯೂ ಸಿಎಸ್​ಕೆ ತಂಡವು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

Exit mobile version