ರಿಕ್ಕಿ ರೈ ಮೇಲೆ ಶೂಟೌಟ್‌ ಕೇಸ್‌: ಮುತ್ತಪ್ಪ ರೈ 2ನೇ ಪತ್ನಿ ಅನುರಾಧ ಸೇರಿ ನಾಲ್ವರ ವಿರುದ್ಧ FIR

ಬೆಂಗಳೂರು: ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುತ್ತಪ್ಪ ರೈನ 2ನೇ ಪತ್ನಿ ಅನುರಾಧಾ ಸೇರಿದಂತೆ ನಾಲ್ವರ ವಿರುದ್ಧ ಬಿಡದಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ರಾಕೇಶ್‌ ಮಲ್ಲಿ, 2ನೇ ಪತ್ನಿ ಅನುರಾಧ, ನಿತೇಶ್ ಶೆಟ್ಟಿ, ವೈದ್ಯನಾಥನ್ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 173 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಿಕ್ಕಿ ರೈ ಮೇಲೆ 2 ಬಾರಿ ಗುಂಡಿನ ದಾಳಿ ನಡೆದಿರುವುದು ಪೊಲೀಸ್‌ ತನಿಖೆ ವೇಳೆ ತಿಳಿದುಬಂದಿದೆ. ಬಿಡದಿ ಮನೆಯಿಂದ ಸದಾಶಿವ ನಗರ ಮನೆಗೆ ಹೊರಟಿದ್ದ ರಾತ್ರಿ 11 ಗಂಟೆ ಹೊತ್ತಿಗೆ ಫೈರಿಂಗ್ ನಡೆದಿದೆ. ಅದೃಷ್ಟವಶಾತ್ ಈ ವೇಳೆ ಕಾರಿಗೆ ಅಥವಾ ರಿಕ್ಕಿ ರೈಗೆ ಯಾವುದೇ ಗುಂಡು ತಾಗಿಲ್ಲ. ಶಬ್ಧ ಕೇಳಿ ಚಾಲಕ ಬಸವರಾಜು ಕೆಳಗೆ ಇಳಿದು ನೋಡಿದ್ದಾರೆ, ಬಳಿಕ ಪರ್ಸ್‌ ಮರೆತು ಬಂದಿರುವುದಾಗಿ ರಿಕ್ಕಿಗೆ ತಿಳಿಸಿ ಮತ್ತೆ ಮನೆಗೆ ಹೋಗಿದ್ದಾರೆ. ಬಳಿಕ ಬೆಂಗಳೂರಿಗೆ ಹೊರಡಲು ಮುಂದಾದಾಗ ರಾತ್ರಿ 12:50ರ ಸುಮಾರಿಗೆ ಮತ್ತೆ ಗುಂಡಿನ ದಾಳಿ ನಡೆದಿದೆ. ಪೊಲೀಸರು ಪರಿಶೀಲನೆ ನಡೆಸಿದಾಗ 2 ಬುಲೆಟ್‌ಗಳು ಪತ್ತೆಯಾಗಿವೆ.

ಏನಿದು ಘಟನೆ?
ರಿಕ್ಕಿ ರೈ ತಮ್ಮ ಫಾರ್ಚೂನರ್ ಕಾರಿನಲ್ಲಿ ಡ್ರೈವರ್ ಮತ್ತು ಗನ್‌ಮ್ಯಾನ್ ಜೊತೆಗೆ ಬಿಡದಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ 12:50ರ ಸುಮಾರಿಗೆ 2 ಸುತ್ತಿನ ಗುಂಡಿನ ದಾಳಿ ನಡೆದಿದೆ. ಮನೆಯ ಕಾಂಪೌಂಡ್ ಬಳಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ರಿಕ್ಕಿ ರೈ ಅವರಿಗೆ ಗಾಯಗಳಾಗಿವೆ. ತಕ್ಷಣವೇ ಅವರನ್ನು ಬಿಡದಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ

Exit mobile version